top of page

ಹನುಮಂತಾಚಾರ್‌ ಉಯಿಲು

ಕೆ ಸತ್ಯನಾರಾಯಣ

ಹನುಮಂತಾಚಾರ್‌ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹಿರಿಯರು. ನೋಡುವುದಕ್ಕೆ ಹೆಸರಿಗೆ ತಕ್ಕ ಹಾಗೇ ಇದ್ದಾರೆ ಎಂದು ಮೂತಿ ತೀರಾ ಮುಂದಾಗಿರುವ ಅವರ ಮುಖವನ್ನು ಉದ್ದೇಶಿಸಿ ಎಲ್ಲರೂ ಗೇಲಿ ಮಾಡಿದರೂ ಈ ಗೇಲಿಯೇ ನಗಣ್ಯವಾಗುವಂತಹ ಇನ್ನೂ ನಾನಾ ಆಯಾಮಗಳಿವೆ. ಹಿರಿಯರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ನಮ್ಮ ಕ್ಷೇಮ ಕಲ್ಯಾಣ ಸಮಿತಿಯ ಗೌರವಾಧ್ಯಕ್ಷರು. ಕಾಲೋನಿಗೆ ಸಂಬಂಧಪಟ್ಟ ಎಲ್ಲ ಆಫೀಸು ಕೆಲಸಗಳನ್ನೂ ಮಾಡಿಕೊಡುತ್ತಾರೆ, ಮಾಡಿಸಿಕೊಡುತ್ತಾರೆ. ಆದರೆ ಯಾವುದೇ ನಾಯಕತ್ವದ ಹುದ್ದೆ, ಪ್ರಚಾರ ಬೇಡ ಅನ್ನುತ್ತಾರೆ. ಯಾವುದಾದರೂ ತಕರಾರು ವಾದ-ವಿವಾದ ಬಂದಾಗ ನ್ಯಾಯಕ್ಕೆ ಅವರ ಹತ್ತಿರ ಹೋದರೆ, ಇಲ್ಲ, ಅವರನ್ನು ನ್ಯಾಯ ಪಂಚಾಯಿತಿಗೆ ಕೂರಬನ್ನಿ ಅಂತ ಕರೆದರೆ, ಇನ್ನೊಂದು ನಾಲ್ಕು ದಿನ ಅಥವಾ ಒಂದೆರಡು ವಾರ ತಡೆದು ಬನ್ನಿ ಅಂತಾರೆ. ಅವರು ಕೊಟ್ಟ ಕಾಲಾವಧಿಯೊಳಗೆ ತಕರಾರು, ವಾದ-ವಿವಾದ ಎಲ್ಲವೂ ತನಗೆ ತಾನೇ ಪರಿಹಾರವಾಗಿಬಿಡುತ್ತೆ. ಜೀವನ ಅಂದರೆ ಅಷ್ಟೇ. You should allow anything and everything to pass. ಎಲ್ಲವನ್ನೂ ಆ ಕ್ಷಣದಲ್ಲಿ, ತಕ್ಷಣವೇ ಇತ್ಯರ್ಥ ಮಾಡೋಕೆ ಹೊರಟರೆ, ಎಲ್ಲವೂ ನಮ್ಮ ಮೈ ಮೇಲೇ ಬೀಳುತ್ತದೆ. ಬದುಕೆಂದರೆ ಕಾಲದ ಕ್ಷಣ ಕ್ಷಣದ ಚಲನೆಯನ್ನು ನಿರೀಕ್ಷಿಸುವುದು. ನಿರೀಕ್ಷಿಸುತ್ತಾ ಸುಮ್ಮನೆ ಇದ್ದುಬಿಡುವುದು.

ಸಾವು, ನೋವು, ವಿಚ್ಛೇದನ, ಹೊಸ ಮಕ್ಕಳ ಜನನ, ಅತಿಥಿಗಳ ಆಗಮನ, ನಿರ್ಗಮನ ಎಲ್ಲದಕ್ಕೂ ಹೀಗೇ ಸಾವಾಧಾನವಾಗಿ ಪ್ರತಿಕ್ರಿಯಿಸಿ ಮಾರ್ಗದರ್ಶನ ಮಾಡುತ್ತಾರೆ. ನಾಯಕತ್ವ ಒದಗಿಸುತ್ತಾರೆ. ವಿದೇಶಗಳಲ್ಲಿರುವ ಅವರ ಮಕ್ಕಳು, ಮೊಮ್ಮಕ್ಕಳು ಬಂದಾಗಲೂ ವಿಶೇಷ ಸಂಭ್ರಮ ಪಟ್ಟಂತೆ ಕಾಣುವುದಿಲ್ಲ. ಮೊದಮೊದಲು ನನಗೂ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ಮನುಷ್ಯ ಸ್ವಲ್ಪ ತಣ್ಣನೆಯ ಪ್ರವೃತ್ತಿಯವರಿರಬೇಕು, ನಿರ್ಲಿಪ್ತತೆಯ ನೆಪದಲ್ಲಿ ಭಾವನೆಯೇ ಇಲ್ಲದ ಮನುಷ್ಯನಿರಬೇಕು ಎಂದುಕೊಳ್ಳುತ್ತಿದ್ದೆ. ಕಾಲಕ್ರಮೇಣ ಸ್ಪಷ್ಟವಾಯಿತು. ಮನುಷ್ಯನಿಗೆ ಕೇವಲ ವಯಸ್ಸಾಗಿಲ್ಲ, ಪ್ರಬುದ್ಧತೆಯಿದೆ, ಮಾಗಿದ ಮನಸ್ಸಿದೆ.

ಇಂತಹ ಹನುಮಂತಾಚಾರ್ರು ಈಚೆಗೆ ಕೆಲವು ವರ್ಷಗಳಿಂದ ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಕೇಳಿದರೆ ಅಭ್ಯಾಸ ಅಲ್ಲ, ಅದು ಪದ್ಧತಿ ಎಂದು ಬಿಡಿಸಿ ಹೇಳುತ್ತಾರೆ, ತಮಾಷೆ ಮಾಡುತ್ತಾರೆ, ತುಂಬಾ ಹೊತ್ತು ನಗುತ್ತಲೇ ಇರುತ್ತಾರೆ.

ಕಾಲೋನಿಯಲ್ಲಿ ಯಾರೇ ಸತ್ತರೂ ನಾವೆಲ್ಲ ಕ್ರಿಯೆ, ಕರ್ಮಗಳನ್ನು ಮಾಡಲು, ಮಾಡಿಸಲು ಪಾಡು ಪಡುತ್ತಿರಬೇಕಾದರೆ, ಇವರು ಮಾತ್ರ ಕಣ್ಮರೆಯಾಗಿಬಿಡುತ್ತಾರೆ, ದೇಶಾಂತರ ಹೋಗಿಬಿಡುತ್ತಾರೆ. ಯಾರಿಗೂ ಹೇಳೋಲ್ಲ, ಕೇಳೋಲ್ಲ. ವಾಪಸ್‌ ಬರುವಾಗಲೂ ಅಷ್ಟೆ, ವಾರಗಳು, ತಿಂಗಳುಗಳು ಕಳೆದ ಮೇಲೆ ಇದ್ದಕ್ಕಿದ್ದಂತೆ ಬಂದುಬಿಡುತ್ತಾರೆ, ಯಾವುದೇ ಮುನ್ಸೂಚನೆ, ಮಾಹಿತಿ ಇಲ್ಲದೆ. ನಮ್ಮನ್ನೆಲ್ಲ ಬಿಟ್ಟು ಎಲ್ಲೂ ಹೋಗೇ ಇರಲಿಲ್ಲವೇನೋ ಅನ್ನುವ ಲಯದಲ್ಲಿ ಸಲೀಸಾಗಿ ಬೆರೆತು ಹಿಂದಿನಂತವರಾಗಿಬಿಡುತ್ತಾರೆ.

ಹೀಗೆ ಪದೇಪದೇ ದೇಶಾಂತರ ಹೋಗಲು ಅವರು ಕೊಡುತ್ತಿದ್ದ ಕಾರಣ ವಿಚಿತ್ರವಾಗಿತ್ತು, ವಿಕ್ಷಿಪ್ತವಾಗಿತ್ತು. ಯಾರೇ ಸತ್ತಾಗಲೂ ನಮಗೆ ದುಃಖವಾಗೋಲ್ಲ. ನಿಜ ಹೇಳಬೇಕೆಂದರೆ, ನಮಗೆ ಗೊತ್ತಿರುವವರು ಒಬ್ಬರು ಸತ್ತು ಹೋದರೆ, ನಮಗೆ ಇನ್ನೊಂದಿಷ್ಟು ಬದುಕುವ ಅವಕಾಶ ಹೆಚ್ಚಾಗುತ್ತೆ. ಸತ್ತವರ ಆಯಸ್ಸು ಕೂಡ ನಮ್ಮ ಆಯಸ್ಸಿಗೆ ಸೇರಿಕೊಂಡು ನಮ್ಮ ಜಾತಕದ ಇನ್ನೊಂದೆರಡು ಪುಟಗಳು ಹೆಚ್ಚಾಗುತ್ತೆ. ಇನ್ನೊಬ್ಬರು ಸತ್ತಾಗ ಹೇಳುವುದಕ್ಕೆ ಮಾತುಗಳು ಕೂಡ ಇರುವುದಿಲ್ಲ. ಇದುವರೆಗೆ ಸತ್ತವರ ಬಗ್ಗೆ ಹೇಳಿದ ಮಾತುಗಳನ್ನು ಮತ್ತೂ ಇನ್ನೊಂದು ಸಲ ಹೇಳುತ್ತೇವೆ. ನಿಜ, ಪ್ರತಿಯೊಬ್ಬರು ಸತ್ತಾಗಲೂ ಹೊಸ ಮಾತು, ಹೊಸ ಪದ ಸೃಷ್ಟಿಯಾಗೋಕೆ ಸಾಧ್ಯವಿಲ್ಲ. ಆದರೆ ಕೊನೇ ಪಕ್ಷ ನಾನಾದರೂ ಹಾಗೆ ಮಾತನಾಡುವುದನ್ನು ತಪ್ಪಿಸಿಕೊಳ್ಳಬಹುದಲ್ಲ. ಹೌದು, ಸಭ್ಯತೆಗೋಸ್ಕರ ದುಃಖ ನಟಿಸಬೇಕಾಗುತ್ತೆ. ನಿನ್ನೆ ಸತ್ತವರ ಬಗ್ಗೆ ಆಡಿದ ಮಾತನ್ನೇ ಈವತ್ತು ಸತ್ತವರ ಬಗ್ಗೆಯೂ ಹೇಳಬೇಕಾಗುತ್ತೆ, ಹೇಳುತ್ತಾರೆ. ಯಾಕೆ ಹಾಗೆ ಮಾಡುತ್ತಾರೆ ಅನ್ನುವುದನ್ನು ನಾನು ಗೌರವಿಸ್ತೀನಿ. ಆದರೆ ನನಗೂ ಹಾಗೆ ಮಾಡಬೇಕು, ಅದೇ ಮಾತುಗಳನ್ನಾಡಬೇಕು ಅಂತ ಯಾರೂ ಒತ್ತಾಯ ಮಾಡಬಾರದು.

ಯಾರಾದರೂ ಸತ್ತಾಗ ನನಗೆ ಭಯ ಶುರುವಾಗಿಬಿಡುತ್ತೆ. ಸಹಜೀವಿ ಕಳೆದುಹೋದರು ಎನ್ನುವ ಕಾರಣಕ್ಕಲ್ಲ. ಅಯ್ಯೋ ಮತ್ತೆ ಅದೇ ಮಾತುಗಳನ್ನು ಕೇಳಬೇಕಲ್ಲ, ಹೇಳಬೇಕಲ್ಲ ಎಂದು. ಫ್ಲಾಟ್‌ನಿಂದ ಎಲ್ಲಾದರೂ ಹೊರಗೆ ಓಡಿಬಿಡ್ತೀನೆ. ದೇಶಾಂತರವೆಂದು ಎಲ್ಲರೂ ಹೇಳಿದರೂ ಅದು ಹಾಗೇನಲ್ಲ. ರೈಲು ನಿಲ್ದಾಣಕ್ಕೆ ಹೋಗಿ, ನಿಂತಿರುವ ರೈಲು ಎಲ್ಲಿಗೆ ಹೋಗುತ್ತೋ ಅಲ್ಲಿಗೆ ಹೋಗ್ತೀನಿ. ಇಲ್ಲ, ಮಾರ್ಗಮಧ್ಯದಲ್ಲಿ ಇಳಿದುಬಿಡ್ತೀನಿ. ಇಳಿದ ಗ್ರಾಮದಲ್ಲೇ ಇರುತ್ತೇನೆ. ಅಕ್ಕಪಕ್ಕದ ಹೊಲ, ಗದ್ದೆ, ಕಾಡು, ನದಿ, ತೊರೆಗಳನ್ನು ಸುಮ್ಮನೆ ನೋಡ್ತಾ ಇರುತ್ತೇನೆ. ಆಕಾಶ ನೋಡ್ತಾ, ಮೋಡಗಳ ರಾಶಿ ಎಷ್ಟಿರಬಹುದೆಂದು ಲೆಕ್ಕ ಹಾಕುತ್ತಾ ಮೋಡದ ರಾಶಿಗಳ ಚಲನೆಯನ್ನು ಅನುಸರಿಸಿ ನಾನೂ ಭೂಮಿಯ ಮೇಲೆ ನಡೆದುಕೊಂಡು ಹೋಗ್ತೀನಿ. ನನಗೆ ಗೊತ್ತಿರುವ ಭಾಷೆ, ಮಾತು, ವಾಕ್ಯ, ಪದಗಳು ಎಲ್ಲ ಮರೆತು ಹೋಗಲಿ ಎಂದು ಆಸೆ ಪಡುತ್ತೇನೆ, ಪ್ರಾರ್ಥಿಸುತ್ತೇನೆ. ಸಾವಿಗೆ ಬದುಕಿಗೆ ವ್ಯತ್ಯಾಸ ಇದೆ ಅಂತ ಅನಿಸೋಲ್ಲ. ಬದುಕಿರುವವರಿಗೆ ಸಾವಿನ ವ್ಯಾಖ್ಯಾನದ ಅಗತ್ಯ ಇದೆ. ಆಕಾಶಕ್ಕಿಲ್ಲ, ಮರಗಳಿಗಿಲ್ಲ, ಗಿಡಗಳಿಗಿಲ್ಲ, ಸಾವಿಗೂ ಇಲ್ಲ. ನನಗಂತೂ ಸೂರ್ಯಾಸ್ತ ನೋಡಿದಾಗ, ಸೂರ್ಯೋದಯ ನೋಡಿದಾಗ ಒಂದೇ ಭಾವ ಬರುತ್ತೆ. ಬೆಳದಿಂಗಳು, ಮುಂಜಾವು ಕೂಡ ಒಂದೇ. ಅದು ಬೇರೆ ಬೇರೆ ಎಂದು ಹೇಳಿಕೊಡುವುದು ನಮ್ಮ ಭಾಷೆಯೇ ಹೊರತು, ಬೆಳದಿಂಗಳೂ ಅಲ್ಲ, ಮುಂಜಾವೂ ಅಲ್ಲ. ನಮ್ಮ ಉಸಿರಾಟವನ್ನು ನಾವೇ ಗಮನಿಸುತ್ತಾ ನಿರಂತರವಾಗಿ ನೋಡುತ್ತಾ ಮಾತು, ಭಾಷೆ ಎಲ್ಲವನ್ನೂ ಕಳೆದುಕೊಂಡು ಸುಮ್ಮನಿದ್ದುಬಿಡಬೇಕು.

ಇಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ನನ್ನದೊಂದು ವಸತಿ ಇದೆ ಎಂದು ನನಗೆ ಗೊತ್ತು. ವಸತಿ ಇದೆ ಎಂದು ಇರಬೇಕು, ಬರಬೇಕು ಅಷ್ಟೇ. ಏಕೆಂದರೆ, ಇದು ಮಗನ ಹೆಸರಲ್ಲಿ ಇದೆ. ನಾನೊಬ್ಬ Caretaker ಅಷ್ಟೇ. ನನ್ನ ವಿಚಾರವನ್ನೆಲ್ಲ ಮಗನಿಗೆ ಹೇಳಿದ್ದೇನೆ, ವಿವರಿಸಿದ್ದೇನೆ. ಎಲ್ಲದರಿಂದ ಮುಕ್ತಿ ಪಡೆಯಬೇಕು ಎಂದು ಕೋರಿದ್ದೇನೆ. ಬಿಡುಗಡೆ ಸಿಗಬೇಕಲ್ಲ. ಇಲ್ಲ, ಇಲ್ಲ, ಬಿಡುಗಡೆ ಇಲ್ಲ. ಸಿಗದ ಬಿಡುಗಡೆಗೆ ಹೋಲಿಸಿದರೆ ಎದುರಾಗುವ ಸಾವೇ ಸುಲಭ ಎಂದು ನನಗನಿಸುತ್ತೆ. ಬದುಕುವುದು, ನಿತ್ಯವೂ ಬದುಕುವುದು, ಬದುಕುತ್ತಾ ಹೋಗುವುದೇ ಸಹಜವಾದದ್ದು. ಮನುಷ್ಯ ಹುಟ್ಟುವುದೇ ಬದುಕುವುದಕ್ಕೆ, ಬದುಕುತ್ತಾ ಹೋಗುವುದಕ್ಕೆ. ಸಾವೆನ್ನುವುದು Disruption. Source of disturbance. ಬದುಕು ಇಷ್ಟವಾಗದವರು, ಬದುಕಿನ ಬಗ್ಗೆ ಅಸೂಯೆ ಪಡುವವರು ನೀಡುವ ಶಾಪ. ಏನೇ ಆದರೂ ನಮಗೆ ಸಾವು ಇಷ್ಟವಿಲ್ಲದ ಸಂಗತಿ. ಅದರ ಬಗ್ಗೆ ಭಯ ಇರಬಹುದು. ಅದನ್ನು ಪೂಜೆ ಮಾಡಬಹುದು. ಆದರೆ ಅದೆಲ್ಲ ನಾಟಕ, ಅಭಿನಯ. ಅದಕ್ಕೇ ನಾವು ಕೃತಕ ಭಾಷೆ ಬಳಸುತ್ತೇವೆ. ಯಾಂತ್ರಿಕವಾದ ಭಾವ ಹಂಚಿಕೊಳ್ಳುತ್ತೇವೆ. ಇದೆಲ್ಲ ನಮಗೆ ಎಷ್ಟು ಅಸಹಜ ಎಂದರೆ, ಇದನ್ನು ಮರೆತು ನಮ್ಮ ಸಹಜ ಧರ್ಮವಾದ ಬದುಕುವುದಕ್ಕೆ ಬಹುಬೇಗ, ಬಹು ಉತ್ಸುಕತೆಯಿಂದ ಹಿಂತಿರುಗಿಬಿಡುತ್ತೇವೆ. ಇದರಿಂದೆಲ್ಲ ತಪ್ಪಿಸಿಕೊಳ್ಳಲು ನನಗೆ ಉಳಿದಿರುವ ಒಂದೇ ದಾರಿ ಎಂದರೆ ದೇಶಾಂತರ. ದೇಶಾಂತರದಿಂದ ವಾಪಸ್‌ ಬಂದ ಮೇಲೆ, ಸಾವನ್ನು ಜನ ಮರೆತುಬಿಟ್ಟಿರುತ್ತಾರೆ, ನನ್ನನ್ನು ಕೂಡ. ನಾನು ವಾಪಸ್‌ ಬಂದೆನೆಂದು ಸ್ವಾಗತಿಸುವರೇ ಹೊರತು ಯಾರೊಬ್ಬರೂ ನನಗಾಗಿ ಕಾದು ಕೂತಿರುವುದಿಲ್ಲ.

*

 

ಇಂತಹ ಇಷ್ಟೊಂದು ವಿಚಾರಗಳ ಹನುಮಂತಾಚಾರ್ರು, ಹೋಗುವ ಮತ್ತೆ ಬರುವ, ಮತ್ತೆ ಹೋಗಿಬಿಡುವ ಜಂಜಾಟದಲ್ಲಿ ಕೂಡ ನಮಗೆಲ್ಲ ಒಂದು ವಾಡಿಕೆಯಾಗಿಬಿಟ್ಟಿದ್ದರು. ಈ ವಾಡಿಕೆಯ ಮಧ್ಯೆ ಅವರು ಒಂದು ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರು ಕೂಡ. ನಮಗೆಲ್ಲ ಇದು ಏನಪ್ಪಾ ಈ ಹನುಮಂತಾಚಾರ್ರು ಎನಿಸಿಬಿಟ್ಟಿತು.

*

ಈಚೆಗೆ ನಮ್ಮ ನಾಡಿನ ನಟರೊಬ್ಬರು ತೀರಿಹೋದರು. ಅವರ ಹಿಂದೆ ಒಬ್ಬ ಕವಿ. ಇನ್ನೂ ಹಿಂದೆ ಒಬ್ಬ ಹಾಡುಗಾರ. ಅದಕ್ಕೆ ಹಿಂದೆ ಒಬ್ಬ ಜಗದ್ಗುರು. ಅದಕ್ಕೂ ಹಿಂದೆ ಒಬ್ಬ ಜಾತಿ ನಾಯಕ. ನಮಗೆಲ್ಲಾ ಒಂದು ರೀತಿಯ ಹಬ್ಬ ಶುರುವಾಯಿತು. ಒಂದು ಹದಿನೈದು ಇಪ್ಪತ್ತು ದಿನ ಒಟ್ಟೊಟ್ಟಿಗೆ ಟೆಲಿವಿಷನ್‌ ಚಾನೆಲ್‌ಗಳಲ್ಲಿ ನಿರಂತರ ಶವ ದರ್ಶನ, ಅದಕ್ಕೆ ಸ್ನಾನ, ಪೂಜೆ, ಅದರ ಸುತ್ತ ಕವಾಯಿತು, ಗುಂಡು ಹಾರಿಸುವುದು, ಹಾಡು, ಹರಿಕಥೆ, ನಟರ, ನಾಯಕರ, ಗಣ್ಯರ ದರ್ಶನ. ದರ್ಶನಕ್ಕನುಗುಣವಾಗಿ ತೀರಾ ಈಚಿನ ಕೇಶ ವಿನ್ಯಾಸ, ವಸ್ತ್ರ ವಿನ್ಯಾಸ, ಮಾತುಕತೆ, ಗುಣಗಾನ, ರೋದನ, ರೋದನ. ನಮಗೆ ಬಿಡುವೇ ಇಲ್ಲ. ಒಂದರಿಂದ ಇನ್ನೊಂದಕ್ಕೆ, ಒಂದು ಚಾನೆಲ್‌ನಿಂದ ಇನ್ನೊಂದು ಚಾನೆಲ್‌ಗೆ ಹೊಂದಿಕೊಳ್ಳುವುದಕ್ಕೂ ಗಡಿಬಿಡಿ.

ಇದೇ ಸಂದರ್ಭದಲ್ಲಿ ನಮ್ಮ ಅಪಾರ್ಟ್‌ಮೆಂಟ್‌ನಲ್ಲೇ ಇದ್ದ ಪ್ರಸಿದ್ಧ ಗಾಯಕಿ ಮಾಲಾ ಅವರನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಅದೃಷ್ಟವಷಾತ್‌ ಯಶಸ್ವಿಯಾಗಿಲ್ಲ. ಎರಡು ಮೂರು ದಿನವಾದರೂ ಫ್ಲಾಟ್‌ ಬಾಗಿಲು ತೆರೆಯದೆ ಹೋದಾಗ ಮನೆಗೆಲಸದವಳಿಗೆ ಅನುಮಾನ ಬಂದು, ಪೋಲೀಸರಿಗೆ ದೂರು ನೀಡಿ, ಕದ ಒಡೆದು ನುಗ್ಗಿದಾಗ, ಮಾಲಾರವರ ಮೇಕಪ್‌ ಇನ್ನೂ ಹಾಗೇ ಇದೆ. ಕುತ್ತಿಗೆಯ ಸುತ್ತ ಬೆರಳಿನ ಗುರುತು ಕೂಡ ಇದೆ. ಗಾಯಕಿ ಹಲ್ಲಿನಲ್ಲಿ ಬೆಡ್‌ಶೀಟ್‌ ಕಚ್ಚಿರುವುದು ಕೂಡ ಗೊತ್ತಾಯಿತು. ಪೋಲೀಸರು ನುಗ್ಗಿದಾಗ ಉಸಿರಾಟ ಇನ್ನೂ ಇತ್ತು ಕ್ಷೀಣವಾಗಿ. ಇದೂ ಕೂಡ ದೃಶ್ಯ ಮಾಲಿಕೆಯಾಗಿ ಇಡೀ ದಿನ ಟೆಲಿವಿಷನ್‌ನಲ್ಲಿ ಬಂತು. ಅವತ್ತು ಕಛೇರಿ ಕೆಲಸ ತುಂಬಾ ಇದ್ದುದರಿಂದ ರಾತ್ರಿ ತಡವಾಗಿ ಮನೆಗೆ ಬಂದ ನಾನು ಊಟ-ಗುಂಡು ಎಲ್ಲ ಮುಗಿಸಿ, ಎಲ್ಲರೂ ಮಲಗಿದ ಮೇಲೆ ಆರಾಮವಾಗಿ ಒಬ್ಬನೇ ಕುಳಿತು ದೃಶ್ಯಾವಳಿಗಳನ್ನು ಹಿಂದೆ ಮುಂದೆ ಮಾಡಿ ಮತ್ತೆ ಮತ್ತೆ ನೋಡಿ ಮಲಗಿದಾಗ ನಡುರಾತ್ರಿಯಾಗಿತ್ತು. ಆಕೆ ಗಾಯಕಿಯಾದ್ದರಿಂದ ದೃಶ್ಯಾವಳಿಗೆ The Music Spectacle – Death in flow ಎಂದು ಶೀರ್ಷಿಕೆಯನ್ನು ಕೂಡ ನೀಡಲಾಗಿತ್ತು.

ಪೋಲೀಸರು ಏನೆಂದು ತನಿಖೆ ಮಾಡಿಯಾರು. ಮಾಲಾ ಪ್ರಸಾದರನ್ನು ಕೊಲೆ ಮಾಡಲು ಯಾರಿಗಾದರೂ, ಏನಾದರೂ ಕಾರಣ ಇರುವುದುಂಟೆ? ಮಾಲಾ ಪ್ರಸಾದ್‌ ಕೂಡ ಕಲಾವಿದೆಯಾಗಿ ಬಹು ಪ್ರಶಸ್ತಿ ಪುರಸ್ಕೃತರು. ಜನಪ್ರಿಯ ಕಲಾವಿದೆ. ದಾನ-ಧರ್ಮಕ್ಕೆ ಕೂಡ ಹೆಸರಾದವರು. ಹಾಗಾಗಿ ಆತ್ಮಹತ್ಯೆಗೆ ಕೂಡ ಕಾರಣಗಳಿಲ್ಲ.

ಇಷ್ಟೊಂದು ಸರಣಿ ಸಾವುಗಳನ್ನು ಹನುಮಂತಾಚಾರ್‌ ಸಹಜವಾಗಿ ಸಹಿಸಲಾರದೆ, ದುಃಖಪಡಲಾಗದೆ ದೇಶಾಂತರ ಹೋಗಿಬಿಟ್ಟಿದ್ದರು. ಎಂದಿನಂತೆ ಎಲ್ಲವೂ ತಣ್ಣಗಾಗಿ ಹಿಂದಿನಂತಾಗುತ್ತಿದೆ ಅನ್ನುವ ದಿನಗಳು ಮತ್ತೆ ಬರುತ್ತಿವೆ ಎಂದುಕೊಳ್ಳುತ್ತಿರುವಾಗ ದೂರದ ನೈನಿತಾಲ್‌ನಿಂದ ಆಚಾರ್ರು ಬರೆದ ಒಂದು ಪತ್ರ ಬಂದು, ಅದನ್ನು ಅಪಾರ್ಟ್‌ಮೆಂಟ್‌ನ ನೋಟೀಸ್‌ ಬೋರ್ಡ್‌ನಲ್ಲಿ ಹಾಕಲಾಯಿತು. ಒಂದು ಪ್ರತಿಯನ್ನು ಅವರು ಪೋಲೀಸರಿಗೂ ಕೂಡ ಕಳಿಸಿದ್ದರು.

*

ಮಾಲಾ ಪ್ರಸಾದರ ಕೊಲೆಗೆ ಪ್ರಯತ್ನಿಸಿದವನು ನಾನೇ. ಆಕೆಯ ದೇಹಸಿರಿ, ಕಂಠಸಿರಿ, ಮಾಧುರ್ಯ ಎಲ್ಲವೂ ಸರಿ. ನಾನೂ ಕೂಡ ಆಕೆಯ ಅಭಿಮಾನಿಯೇ. ಆದರೆ ಈ ಸಲ ಅವರು ಮಿತಿ ಮೀರಿದರು. ನಟ, ಕವಿ, ಹಾಡುಗಾರ, ನಾಯಕ ಹೀಗೆ ಒಬ್ಬರ ನಂತರ ಒಬ್ಬರು ಸತ್ತಾಗ, ಸಾಯುತ್ತಲೇ ಹೋದಾಗ, ಎಲ್ಲರ ಬಗ್ಗೆಯೂ ಮಾತನಾಡಲು, ಹಾಡು ಹಾಡಲು, ನೆನಪುಗಳನ್ನು ಹಂಚಿಕೊಂಡು ಸಾರ್ವಜನಿಕವಾಗಿ ಅಳಲು ನಿರಂತರವಾಗಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದರು. ಒಂದು ಪ್ರದರ್ಶನದಿಂದ ಇನ್ನೊಂದು ಪ್ರದರ್ಶನಕ್ಕೆ ಅವರ ಕೇಶ ವಿನ್ಯಾಸ ಮತ್ತು ವಸ್ತ್ರ ವಿನ್ಯಾಸ ಹೆಚ್ಚು ಹೆಚ್ಚು ಆಕರ್ಷಕವಾಗುತ್ತಾ ಹೋಗುತ್ತಿತ್ತು. ಶಾಲಾ ಬಾಲಕರಿಗೂ ಗೊತ್ತಾಗುವ ರೀತಿಯಲ್ಲಿ ಆಕೆ Beauty Parlour ಗೆ ಹೋಗಿ ನಂತರ ಚಾನೆಲ್‌ಗೆ ಬರುತ್ತಿದ್ದುದು ಸಕಲರಿಗೂ ಗೋಚರವಾಗುತ್ತಿತ್ತು. ಒಂದು ವಾರದೊಳಗೆ ಎರಡು ಸಲ ಹುಬ್ಬು ತೀಡಿಸಿಕೊಂಡು, ಮೂರು ಸಲ ಕೂದಲು ಒಪ್ಪ ಮಾಡಿಸಿಕೊಂಡು ಬಂದರೆ ಯಾರಿಗೆ ಗೊತ್ತಾಗುವುದಿಲ್ಲ.

ನಾನು ಒಂದು ನಡುರಾತ್ರಿ ಅವರ ಫ್ಲಾಟಿಗೆ ನುಗ್ಗಿ ಪ್ರಶ್ನಿಸಿದೆ. ನೀವು ಎಷ್ಟೊಂದು ಸಾವುಗಳ Celebration, Spectacle ನಲ್ಲಿ ಆರಾಮವಾಗಿ ಭಾಗವಹಿಸುತ್ತೀರಿ. ಎಲ್ಲರ ಬಗ್ಗೆಯೂ ಒಂದೇ ಹಾಡು, ಒಂದೇ ಭಾಷೆ, ಒಂದೇ ಭಾವ. ಏನಿದು, ತಿಳಿದು ಮಾಡುತ್ತಿರುವಿರೋ ಇಲ್ಲ ಮೋಸ ಮಾಡುತ್ತಿರುವಿರೋ? ಮೊದಲು ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ನಂತರ ಇದರಲ್ಲಿ ನನ್ನ ಆಯ್ಕೆ ಏನಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೊನೆಗೆ ರೋಸಿ ಹೋಗಿ ಒಂದು ಪ್ರಶ್ನೆ ಕೇಳಿದೆ; ನಟನ ಸಾವಿನ ಬಗ್ಗೆ ದುಃಖ ಪ್ರದರ್ಶನ ಮಾಡುವ Episodeನಲ್ಲಿ ನೀವು ಆತನ ಹಣೆಯನ್ನು ಚುಂಬಿಸಿದ್ದು, ಶವದ ಅಂಗಿ ಗುಂಡಿ ತೆಗೆದು ಎದೆಗೂಡನ್ನು ಸವರಿದ್ದು, ಆಮೇಲೆ ಹೃದಯದ ಭಾಗವನ್ನು ಚುಂಬಿಸಿದ್ದು, ಹೃದಯದಿಂದ ಏನೋ ಪಿಸುಮಾತು ಕೇಳಿಸಿಕೊಳ್ಳುತ್ತಿರುವಂತೆ ನಿಮ್ಮ ಬಲಗಿವಿಯನ್ನು ಆತನ ಹೃದಯದ ಹತ್ತಿರ ಇಟ್ಟು ಕಣ್ಣಾಲಿಗಳಲ್ಲಿ ನೀರನ್ನು ತುಂಬಿಕೊಳ್ಳಲು ಪ್ರಯತ್ನಿಸುತ್ತಾ ವಿಷಾದಪೂರ್ಣ ಭಾವವನ್ನು ಪ್ರದರ್ಶಿಸಿದ್ದು … … … ….

ನಾನು ಕಿರುಚಾಡುತ್ತಲೇ ಇದ್ದೆ. ಅದೊಂದು ಕ್ಷಣದಲ್ಲಿ ಮಾಲಾ ಪ್ರಸಾದ್‌ ಉಗ್ರ ರೂಪ ತಾಳಿದರು. ಕಣ್ಣುಗಳಲ್ಲಿ ಕೆಂಡ. ಕುಳಿತಲ್ಲೇ ಗಡಗಡ ನಡುಗಲು ಪ್ರಾರಂಭಿಸಿದರು. ಎದ್ದು ನಿಂತರು. ಪಕ್ಕದ Side Table ಮೇಲಿದ್ದ ಗ್ಲಾಸನ್ನು ತೆಗೆದುಕೊಂಡು ನನ್ನ ಕಡೆಗೆ ರೊಯ್ಯನೆ ಬೀಸಿ You mad fellow ಎಂದು ಚೀರುತ್ತಾ ಹೊಡೆಯಲು ನಡೆಗೆ ಬಂದರು.

ರಕ್ಷಣೆಗಾಗಿ ನಾನೂ ಕೂಡ ಅವರ ಮೇಲೆ ಬಿದ್ದು ಅವರನ್ನು ಕೆಡವಿದೆ. ಉದ್ವೇಗಕ್ಕೊಳಗಾಗಿ ಕತ್ತು ಹಿಸುಕಲು ಹೋದೆ.

 

ಕೊಸರಾಡಿದರು. ಕೊಸರಾಟದ ಮಧ್ಯೆ ಕೂಡ One second ಎನ್ನುವಂತೆ ಕಿರು ಬೆರಳು ತೋರಿಸಿದರು. ಕಣ್ಣುಗಳಲ್ಲಿ ನಿರ್ಧಾರ, ಯಾಚನೆ ಕಾಣುತ್ತಿತ್ತು.

ಸಾವರಿಸಿಕೊಂಡು ಹೇಳಿದರು, 

“ಇದನ್ನೆಲ್ಲ Scriptನಲ್ಲಿ ನಿರ್ದೇಶಕರು ಬರೆದುಕೊಟ್ಟಿದ್ದರು. Rehearsal ನಲ್ಲಿ ಎರಡು ಮೂರು ಸಲ ಅವರೇ ಅಭಿನಯಿಸಿ ತೋರಿಸಿದ್ದರು. ಕೊನೆಯ ದೃಶ್ಯದಲ್ಲಿ ನಾನು ಹೆಣದ ಹಣೆಯ ಮೇಲೆ ಹಾಕುವ ವಿಭೂತಿ ಗೆರೆಗಳಿಗೆ ವಿಭೂತಿಯನ್ನು ನಟನ ಜಾತಿಯ ಮಠದಿಂದಲೇ ತರಿಸಲಾಗಿತ್ತು.”

ಮಾಲಾ ಪ್ರಸಾದರ ಈ ಮಾತುಗಳನ್ನು ಕೇಳಿಸಿಕೊಂಡ ಮೇಲೆ ಅವರನ್ನು ಕೊಲ್ಲುವುದು ನಿರರ್ಥಕವೆನಿಸಿತು. ಅಲ್ಲಿಂದಲೇ ನೇರವಾಗಿ ದೇಶಾಂತರ ಹೊರಟು ಬಂದೆ. ಮತ್ತೆ ಎಂದೂ ವಾಪಸ್‌ ಬರುವುದಿಲ್ಲ.

ಈ ಜಗತ್ತು, ಈ ಭಾಷೆ, ಈ ಬದುಕು ಎಲ್ಲವೂ ಹಾಗೇ ಇರುತ್ತದೆ, ಎಂದೂ ಬದಲಾಗುವುದಿಲ್ಲ.

*

ಹನುಮಂತಾಚಾರ್‌ ಅವರ ಈ ಉಯಿಲು ತುಂಬಾ ದಿನ ನೋಟೀಸ್‌ ಬೋರ್ಡಿನಲ್ಲಿತ್ತು. ಎಲ್ಲರೂ ಪದೇ ಪದೇ ಓದಿದೆವು. ನಾವೆಲ್ಲರೂ ಮಾತ್ರವಲ್ಲ, ಮಾಲಾ ಪ್ರಸಾದ್‌ ಕೂಡ ಆಗಾಗ್ಗೆ ನೋಟೀಸ್‌ ಬೋರ್ಡ್‌ ಹತ್ತಿರ ಬಂದು ನಿಂತುಕೊಂಡು ಅರ್ಧ ಘಂಟೆ, ಮುಕ್ಕಾಲು ಘಂಟೆ, ಒಂದೊಂದೂವರೆ ಘಂಟೆ, ದಿನ, ವಾರ, ಪಕ್ಷದುದ್ದಕ್ಕೂ ಅದನ್ನೇ ಓದುತ್ತಾ ನಿಲ್ಲುವುದನ್ನು ನಾನೇ ನೋಡುತ್ತಾ ಒಂದು ಮರೆಯಲ್ಲಿ ನಿಂತಿರುತ್ತಿದ್ದೆ.

***

bottom of page